ಪಂಗಾಸ್ -
	ಕ್ಯಾಟ್ ಮೀನು (ಮೀಸೆಮೀನು) ಜಾತಿಗೆ ಸೇರಿದ ಮೀನು. ಇದು ಮುಖ್ಯನದಿಗಳಾದ ಸಿಂಧೂ, ಬ್ರಹ್ಮಪುತ್ರ, ಗಂಗಾ ಮತ್ತು ಯಮುನಾ ನದಿಗಳಲ್ಲಿ ದೊರಕುತ್ತದೆ. ಕಾವೇರಿ ನದಿಯಲ್ಲಿ ಶಿವಸಮುದ್ರ ಜಲಪಾತದಿಂದ ಕೆಳಗಿನ ಪ್ರದೇಶದಲ್ಲಿ ಈ ಮೀನು ಸಿಕ್ಕುತ್ತದೆ. ಜಲಪಾತದ ಮೇಲಕ್ಕಿರುವ ಕಾವೇರಿ ನದಿಯಲ್ಲಿ ಇದು ದೊರಕುವುದಿಲ್ಲ. ಬಹುಶಃ ಜಲಪಾತದ ಎತ್ತರ  ಅಡ್ಡಿಯಾಗಿರಬರುತ್ತದೆ.

	ಇದರ ತಲೆ ಚಪ್ಪಟೆ. ಬೆನ್ನಿನ ರೆಕ್ಕೆಯ ಜೊತೆಗೆ ಬೆನ್ನಿನಲ್ಲಿ ಅದರಿಂದ ಸ್ವಲ್ಪ ದೂರದಲ್ಲಿ ಇನ್ನೊಂದು ಕದಿರು ಮತ್ತು ಮುಳ್ಳು ಇಲ್ಲದ ಚಿಕ್ಕ ರೆಕ್ಕೆ ಇದೆ. ಇದರ ಹತ್ತಿರ ಬಾಲದ ಸಂಕುಚಿತವಾಗಿ ಬಾಲದ ರೆಕ್ಕೆಯ ಪ್ರಾರಂಭದವರೆಗೆ ಮುಂದುವರಿಯುತ್ತದೆ. ಇದರಲ್ಲಿ ಎರಡು ಜೊತೆ ಮೀಸೆಗಳಿವೆ.

	ಇದು ಬೇರೆ ಮೀನನ್ನು ತಿನ್ನುತ್ತದೆ. ಅಲ್ಲದೆ ಬಾಳೇಮೀನಿನ ರೀತಿಯಲ್ಲಿ ಇದು ಬಸವನ ಕೀಟಗಳನ್ನೂ ತಿನ್ನುವುದುಂಟು. ಇದರ ಬೆಳೆವಣಿಗೆಯ ಕಾಲದಲ್ಲಿ ಇದಕ್ಕೆ ಬೆಟ್ಟಿನ ಗಾತ್ರದ ಮೀನು ಮರಿಗಳು ಮತ್ತು ಕೀಟಗಳೇ ಆಹಾರ.

	ಮುಂಗಾರು ಮಳೆಯ ತಿಂಗಳುಗಳಲ್ಲಿ ನದಿಗಳಲ್ಲಿ ಸಂತಾನಾಭಿವೃದ್ಧಿ ಮಾದುತ್ತದೆ. ಕಪ್ಪೆಚಿಪ್ಪು ಮತ್ತು ಬಸವನಹುಳು ಪ್ರಾಣಿಗಳ  ಸಂಖ್ಯೆಯನ್ನು ಕೊಳದಲ್ಲಿ ಮತ್ತು ಜಲಾಶಯಗಳಲ್ಲಿ ಹತೋಟಿಯಲ್ಲಿಡಲು ಈ ಮೀನನ್ನು ಬೆಳೆಸುವುದುಂಟು.

	ಈ ಮೀನು 1 ಮೀಟರಿಗೂ ಹೆಚ್ಚು ಉದ್ದ ಬೆಳೆಯುತ್ತದೆ.
(ಬಿ.ಎನ್.)
ಪರಿಷ್ಕರಣೆ:
ಡಾ|| ಎನ್. ಎಸ್. ಲೀಲಾ
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ